ಮಾನವ ಮೊದಲು ವಾಸಿಸಲು ಆರಂಭಿಸಿದ್ದು ಬೆಟ್ಟ ಪ್ರದೇಶದಲ್ಲಿ. ಮಾನವ ಕ್ರೂರಮೃಗಗಳಿಂದ ಕಾಪಡಿಕೊಳ್ಳುತ್ತಾ, ಅವುಗಳನ್ನು ಜಯಿಸಿ ಬಾಳಬೇಕಾಗಿತ್ತು. ಹೆಣ್ಣಿಗಿಂತ ಗಂಡು ದೈಹಿಕವಾಗಿ ಶಕ್ತಿವಂತನಾದುದರಿಂದ ಹೆಣ್ಣಿನ ರಕ್ಷಣೆಯನ್ನು ಗಂಡೇ ಮಾಡಬೇಕೆಂಬ ಒಂದು ನಿಯಮವನ್ನು ರೂಪಿಸಿಕೊಂಡರು. ಇದಕ್ಕೆ ಸಂಬಂಧಿಸಿದಂತೆ ಸಮುದಾಯದಲ್ಲಿ ಒಂದು ನೀತಿ ರೂಪುಗೊಂಡಿತು. ಹಾಗೆ ಒಬ್ಬ ಗಂಡಸು ಹೆಣ್ಣನ್ನು ರಕ್ಷಿಸಲು ಅಸಮರ್ಥನಾದರೆ ಅಂಥವನಿಗೆ ಮದುವೆ ಇಲ್ಲ ಎಂಬ ಸಂಪ್ರದಾಯ ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತಿದ್ದವರಲ್ಲಿ ಹುಟ್ಟಿಕೊಂಡಿತು.

ಈ ಒಂದು ಕಾರಣದಿಂದ ಗಂಡಸು ತನ್ನ ವೀರತನವನ್ನು ಪ್ರದರ್ಶಿಸಲೇ ಬೇಕಿತ್ತು. ತಾನು ಕೊಂದ ಒಂದು ಕಾಡು ಪ್ರಾಣಿಯ ಉಗುರನ್ನೋ, ಹಲ್ಲನ್ನೋ ತಂದು, ಒಂದು ಹೆಣ್ಣಿಗೆ ಅದನ್ನು ಬಹುಮಾನವಾಗಿ ಕೊಟ್ಟು, ತನ್ನ ಶೂರತನವನ್ನು ತೋರಿಸಬೇಕಾಗಿತ್ತು. ಅದನ್ನು ಹಗ್ಗದಲ್ಲಿ ಕಟ್ಟಿ ಅವಳ ಕುತ್ತಿಗೆಗೆ ಕಟ್ಟುತ್ತಿದ್ದನು. ಇದೇ ತಾಳಿ ಕಟ್ಟುವುದರ ಆರಂಭ ಸ್ಥಿತಿ. ಹೀಗೆ ಹೆಂಗಸರನ್ನು ಮನೆಯಲ್ಲಿಟ್ಟು, ಪ್ರೀತಿಯಿಂದ, ಅವಳನ್ನು ಎಲ್ಲ ರೀತಿಯ ವಿಪತ್ತುಗಳಿಂದ ರಕ್ಷಿಸಿ, ಅವಳ ಹಾಗು ತನ್ನ ಜೀವನಕ್ಕಾಗಿ ಬೇಕಾದುದನ್ನು ದುಡಿದು ತರುವ ಹೊಣೆಗಾರಿಕೆ ಗಂಡಿಗೆ ಬಂದಿತು.

ಈ ತಾಳಿ ಕಟ್ಟುವಿಕೆಯಲ್ಲಿ ಇನ್ನೊಂದು ಕುತೂಹಲಕಾರಿ ಸಂಗತಿಯಿದೆ. ಆ ದಿನಗಳಲ್ಲಿ ಆಗಾಗ್ಗೆ ಜನರ ಮಧ್ಯೆ – ಸಂಸ್ಥಾನಗಳ ಮಧ್ಯೆ – ಪೂರ್ವ ಪಶ್ಚಿಮದವರ ಮಧ್ಯೆ – ಯುದ್ಧಗಳು ಆಗುತ್ತಿದ್ದವು. ಈ ಯುದ್ಧಗಳಲ್ಲಿ ಗೆದ್ದವರು ಹೆಂಗಸರನ್ನೇ ಹೆಚ್ಚಾಗಿ ಹಿಂಸಿಸುತ್ತಿದ್ದರು. ಇವರುಗಳಿಂದ ತಮ್ಮ ಶೀಲ ಕಾಪಾಡಿಕೊಳ್ಳಲು ಹೆಂಗಸರು ಪೊಟಾಶಿಯಂ ಸಯನೈಡ್ (Potassium Cyanide) ಎಂಬ ರಸಾಯನಿಕ ವಸ್ತು ಅಥವ ಅದಕ್ಕೆ ಸಮನದ ಮತ್ತೊಂದನ್ನೊ ಒಂದು ಪುಟ್ಟ ಡಬ್ಬಿಯಲ್ಲಿಟ್ಟು ಅದನ್ನು ತಾಳಿಯ ಜೊತೆ ಕಟ್ಟಿಕೊಳ್ಳಲಾರಂಭಿಸಿದರು. ಈ ಡಬ್ಬಿಯನ್ನು ದಾರದಲ್ಲಿ ಕಟ್ಟಿ ಕುತ್ತಿಗೆಗೆ ಹಾಕಿಕೊಳ್ಳುವುದು ಸಂಪ್ರದಾಯವಾಯಿತು. ದಾರದ ಉದ್ದ ಎಷ್ಟಿರಬೇಕೆಂದರೆ – ಮುಚ್ಚಳ ತೆರೆದರೆ ಬಾಯಿಯ ಮಟ್ಟಕ್ಕೆ ಆ ದಾರ ಇರಬೇಕು. ಯಾರದರೂ ಅತ್ಯಾಚಾರ ಮಾಡಲು ಬಂದರೆ ಡಬ್ಬಿಯನ್ನು ತೆಗೆದು ವಿಷ ಸೇವಿಸಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಹೀಗೆ ಹೆಣ್ಣು ತನ್ನ ಶೀಲವನ್ನು ರಕ್ಷಿಸಿಕೊಳ್ಳುತ್ತಿದ್ದಳು. ನಂತರ ಇದರಿಂದ ಏನಾಯಿತೆಂದರೆ ಗಂಡ ಹೆಂಡತಿ ಮಧ್ಯೆ ಏನೇ ಜಗಳ ಬಂದರೂ ಹೆಣ್ಣು ಆ ಡಬ್ಬಿಯಲ್ಲಿದ್ದ ವಿಷ ಸೇವಿಸಿ ಆತ್ಮಹತ್ಯೆಗೆ ಯಸ್ನಿಸುತ್ತಿದ್ದಳು. ನಂತರ ಡಬ್ಬಿಯೇ ಬೇಡ ಎಂದು ಬೊಟ್ಟಿನೊಳಗೇ ಅರಗನ್ನು ಇಡಲು ಆರಂಭಿಸಿದರು.

ಹೀಗೆ ತಾಳಿಯೆಂಬುದು ಗಂಡಿನ ವೀರತನದ ಸಂಕೇತ ಎಂಬುದು ಹೋಗಿ, ಸ್ತ್ರೀಯರಿಗೆ ಆಪತ್ಕಾಲದಲ್ಲಿ ತನ್ನ ಶೀಲವನ್ನು ರಕ್ಷಿಸಿಕೊಳ್ಳುವ ಒಂದು ಸಾಧನವಾಯಿತು. ಈಗ ಅದೂ ಹೋಗಿ ಮದುವೆಯಾದವಳಿವಳು ಎಂದು ತೋರಿಸುವ ಗುರುತಾಗಿ ತಾಳಿ ಬದಲಾಗಿದೆ. ಪೂರ್ವ ಕಾಲದಲ್ಲಿದ್ದ ಕೆಲವು ಆಚರಣೆಗಳು ನಂತರದ ಅಭ್ಯಾಸಗಳ ಜೊತೆ ಸೇರಿ ತಾಳಿ ರೂಪತಾಳಿದೆ. ಒಂದು ದೇಶದಲ್ಲಿ ಬಂದ ಅಭ್ಯಾಸ, ಆಚರಣೆಗಳು ಇತರ ದೇಶಗಳಿಗೂ ಬರುವುದು. ಒಂದು ಗುಂಪಿನವರು ಆಚರಿಸುವ ಹಲವು ಸಂಪ್ರದಾಯಗಳನ್ನು ಇತರರು, ಅದು ಸರಿಯೇ, ತಪ್ಪೇ ಎಂದು ಯೋಚಿಸಿಯೂ ನೋಡದೆ ಹಿಂಬಾಲಿಸಿಬಿಡುತ್ತಾರೆ. ಇದು ಅಗತ್ಯವೇ?